I ಗೃಹಲಕ್ಷ್ಮಿ ಹಣ ಬಿಡುಗಡೆಗೊಳಿಸಲು I ಜಯ ಕರ್ನಾಟಕ ಜನಪರ ವೇದಿಕೆ ಆಗ್ರಹ I
ಶಿಕಾರಿಪುರ: ಚುನಾವಣಾ ಸಂದರ್ಭದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಸರ್ಕಾರ ಉಚಿತ ಐದು ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಮಹಿಳೆಯರಿಗೆ ನೀಡುವ ಗ್ರಹಲಕ್ಷ್ಮಿ ಯೋಜನೆಯನ್ನು ಸರ್ಕಾರ ಸರಿಯಾಗಿ ಮಹಿಳೆಯರಿಗೆ ಪಾವತಿಸದೆ ಪ್ರತಿನಿತ್ಯ ಬ್ಯಾಂಕುಗಳಿಗೆ ಹೋಗಿ ಮಹಿಳೆಯರು ಖಾತೆಗೆ ಹಣ ಬಂದಿದೆ ಎಂದು ಪರದಾಡುವಂತಾಗಿದೆ ಎಂದು ಶಿಕಾರಿಪುರ ತಾಲೂಕು ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯವರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಮಾತನಾಡಿ ಮತದಾರರನ್ನು ಸೆಳೆಯಲು ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಮಹತ್ವದಾಗಿದ್ದು ರಾಜ್ಯದ ಅನೇಕ ಮಹಿಳೆಯರು, ತಾಯಂದಿರು ಈ ಹಣವನ್ನೇ ನಂಬಿ ಹಲವು ಯೋಜನೆಗಳನ್ನು ತಮ್ಮ ಕುಟುಂಬದೊಳಗೆ ರೂಪಿಸಿಕೊಂಡಿದ್ದು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹಣ ಬರದೆ ಈಗಾಗಲೇ 4 -5 ತಿಂಗಳಿಂದಲೂ ಗೃಹಲಕ್ಷ್ಮಿಯ ಹಣ ಬಾಕಿ ಇರುತ್ತದೆ ಎಂದು ಮಹಿಳೆಯರು ಸರ್ಕಾರದ ಗೃಹಲಕ್ಷ್ಮಿಯ ಬಾಕಿ ಹಣಕ್ಕಾಗಿ ಪ್ರತಿನಿತ್ಯ ಬ್ಯಾಂಕುಗಳಿಗೆ ಅಲೆದಾಡುತ್ತಿದ್ದಾರೆ.
ದಸರಾ ಹಬ್ಬಕ್ಕಾದರೂ ಸರ್ಕಾರ ಬಾಕಿ ಗೃಹಲಕ್ಷ್ಮಿ ಹಣ ಪಾವತಿಸುತ್ತಾರೆಂದು ನಂಬಿದ್ದ ರಾಜ್ಯದ ಅನೇಕ ಮಹಿಳೆಯರ ನಂಬಿಕೆ ಹುಸಿಯಾಗಿದೆ. ಈಗ ದೀಪಾವಳಿ ಹಬ್ಬಕ್ಕಾದರೂ ಸರ್ಕಾರ ಕೂಡಲೇ ಬಾಕಿ ಉಳಿದಿರುವ ಕಂತುಗಳ ಹಣವನ್ನು ಬಿಡುಗಡೆಗೊಳಿಸಬೇಕೆಂದು ಸಂಘಟನೆ ಸರ್ಕಾರಕ್ಕೆ ಮನವಿ ಹಾಗೂ ಆಗ್ರಹ ಮಾಡುತ್ತಿದೆ.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಯಶಸ್ವಿಗಾಗಿ ಸರ್ಕಾರದ ಬೊಕ್ಕಸ ತುಂಬಿಕೊಳ್ಳಲು ಬಡವರ ಮಧ್ಯಮ ವರ್ಗದವರ ಮೇಲೆ ಈಗಾಗಲೇ ಸಾಕಷ್ಟು ಹೊರೆಯಾಗಿದ್ದು, ಅಗತ್ಯ ದಿನಸಿ ಬೆಲೆಗಳು ಸೇರಿದಂತೆ ಗಂಡಸರು ಪ್ರತಿನಿತ್ಯ ಓಡಾಡುವ ಬಸ್ಗಳ ಪ್ರಯಾಣ ದರವನ್ನು ಏರಿಸಿದ್ದು ಬಡ ಮಧ್ಯಮ ವರ್ಗದ ಗಂಡಸರ ಮೇಲೆ ಬರೆ ಎಳೆದಿದ್ದಾರೆ ಎಂದು ಆರೋಪಿಸಿದರು.
ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿರವರು ಮಾತನಾಡಿ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಸಂಘಟನೆ ಸ್ವಾಗತಿಸುತ್ತದೆ. ಆದರೆ ಸ್ಥಳೀಯ ಚುನಾವಣೆಗಳು ಬಂದಾಗ ಮಾತ್ರ ಮೂಗಿಗೆ ತುಪ್ಪ ಸವರುವಂತೆ ಆ ಸಂದರ್ಭದಲ್ಲಿ ಹಣ ಬಿಡುಗಡೆಗೊಳಿಸುತ್ತಾರೆ, ಕೂಡಲೇ ದೀಪಾವಳಿ ಹಬ್ಬಕ್ಕಾದರೂ ಬಾಕಿ ಉಳಿಸಿಕೊಂಡಿರುವ ಸಂಪೂರ್ಣ ಹಣವನ್ನು ಬಿಡುಗಡೆ ಮಾಡಿ, ಸರ್ಕಾರದ ಮೇಲೆನಂಬಿಕೆ ಇಟ್ಟಿರುವ ರಾಜ್ಯದ ಮಹಿಳೆಯರ ಉಳಿಸಿಕೊಳ್ಳಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಮಟ್ಟಿಕೋಟೆ ಮಾಲತೇಶ್, ಹುಸೇನ್ ಸಾಬ್, ರಾಜಶೇಖರ್, ಸಣ್ಣ ಹುಸೇನಿ, ನಾರಾಯಣಿ, ಅಕ್ಬರ್ ಆಲಿ ಮಾ ಹೋಟೆಲ್ ಉದ್ಯಮಿ, ದಾದಾಪೀರ್, ಸತೀಶ್, ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

