ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಬೀದಿ ಬದುಕಿನೊಳ ಹಸಿವು ನೀಗಿಸುವ ಗಟ್ಟಿಗಿತ್ತಿ ಸುವರ್ಣಮ್ಮ I
ಸುದ್ದಿ ಮಾಡುವುದಕ್ಕೆ, ಸ್ಪಂದಿಸುವುದಕ್ಕೆ,ಸಮಾಜದ ಕಟ್ಟೆಕಡೆಯ ಬದುಕಿನ ಜ್ವಲಂತ ಸಮಸ್ಯೆಗಳಿಗೆ ದನಿಯಾಗುವುದಕ್ಕೆ, ತಮ್ಮೊಳಗಿನ ಅಭಿವ್ಯಕ್ತಿ ಪ್ರಸ್ತುತಕ್ಕೆ “ಹೈ ಪ್ರೋಪೈಲ್ ರಾಜಕಾರಣವೇ ಬೇಕಿಲ್ಲ, ಅಥವಾ ವಿವಾದಿತ ವಸ್ತು ವಿಷಯಗಳೇ ಬೇಕಿಲ್ಲ..? ಟೀಕೆಗಳನ್ನೆ ಮಾಡಿ ಪ್ರಶ್ನಿಸಿ ಪ್ರಬುದ್ದತೆಯ ಮೆರೆಯುವುದು ಬೇಕಿಲ್ಲ..? ಬರಹಗಳಿಗೂ ವರ್ಗಿಕರಣ, ಬೇದಗಳನ್ನು ಕಾಪಿಟ್ಟುಕೊಂಡರೆ ಇದು ನಿಜದ ಅಭಿವ್ಯಕ್ತಿ ಎನ್ನಲು ಸಾಧ್ಯವೇ..? ಈ ಮೂಲಕ ಯಾರು ಆತ್ಮತೃಪ್ತಿ ಹೊಂದಲಾರರು, ಅಲ್ಲದೇ ಸಾಧಿಸಲಾರರು, ಬದಲಿಗೆ ಬಣವೆಗಿಟ್ಟ ಬೆಂಕಿಯಾಗಬಹುದು..! ಅದು ಕೊಂಚಕಾಲ ಉರಿದು ಅನ್ಯರ ಚಳಿಗೆ ಕಾವು ಕೊಡಬಹುದಷ್ಟೆ ನಂತರ ಉರಿಬೆಂಕಿ ತಣಿದ ಮೇಲೆ ಕೆಂಡವೂ ಆಗದೇ .. ತೂರಿ ಹೋಗುವ ಬೂದಿಯಾಗಿ ಕೆಳಗೆ ಬಿದ್ದು ಕಾಲದೂಳಿನ ಕಸವಾಗುತ್ತದೆ ಅಲ್ಲವೇ..!
ಇಂತಹದೊಂದು ಟಿಪ್ಪಣಿಯೊಂದಿಗೆ ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ” ಮೆಗ್ಗಾನ್” ಕಟ್ಟಡಕ್ಕೆ ಹಾದು ತೆರಳುವ ಮುಂಬಾಗದ ಬಲಬದಿಯಲ್ಲಿ “ಐದು ರೂಪಾಯಿ” “ಹತ್ತು ರೂಪಾಯಿ” ಬಾಚಣಿಕೆ, ಕನ್ನಡಿ, ಗುಂಜು, ಸೋಪು, ಇನ್ನೀತರ ದಿನನಿತ್ಯದ ಸಾಮಾಗ್ರಿಗಳನ್ನು ಮಾರಾಟ ಮಾಡಿ ಬದುಕು ಸಾಗಿಸುವ ಶ್ರಮಿಕಳಾದ “ಸುವರ್ಣಮ್ಮ” ಕುರಿತು ಇಲ್ಲಿ ಲಗತ್ತಿಸಬೇಕು ಎಂದೆನಿಸಿತು.
ಆಕೆ ಕಳೆದ ಮೂವತ್ತು ವರುಷಗಳಿಂದ ತನ್ನ ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದಾಳೆ, ಒಮ್ಮೊಮ್ಮೆ ವ್ಯಾಪಾರ ಆಗದೇ ಹೋದರು ಸರಿ ಅದ್ಯಾವ ಬೇಸರಗಳಿಲ್ಲದೆ, ಹಸಿವ ನೀಗಿಸುವ ಬುತ್ತಿಗೆ ಬೀಗ ಹಾಕಿಕೊಂಡು, ಸರಿ ಸುಮಾರು ಐವತ್ತು ಕೆಜಿ-ತೂಕದ ಸಾಮಾಗ್ರಿಗಳ ಪೆಟ್ಟಿಗೆ- ಹೊರೆಯ ಭಾರವನ್ನು ತಲೆಯ ಮೇಲೆ ಸುತ್ತಿದ ಸಿಂಬೆಗೆ ಹಾಕಿ ಹವಾಯಿ ಚಪ್ಪಲಿಯ ಕಟ್ಟಾದ ಬಾರಿನ ತುದಿಗೆ ಬಟ್ಟೆಪಿನ್ ಟ್ಯಾಗ್ ಮಾಡಿ ಸವೆಸಿ ಸಾಗುವ “ಸುವರ್ಣಮ್ಮ ಇಂದಿನ ಬಹುತೇಕ ಪೀಳಿಗೆಗಳಿಗೆ ಮಾದರಿ.
ಹೌದು ಯಾರ ಹಿಂದೆಯೂ ಆಕೆ ಬೀಳಲಿಲ್ಲ, ಬಿಕ್ಷೆ ಬೇಡಲಿಲ್ಲ, ಕಾಸಿಗಾಗಿ ಯಾರ ಬಳಿಯೂ ತಲೆ ಕೆರೆದು ನಿಲ್ಲಲಿಲ್ಲ, ಸಮಾಜಕ್ಕೆ ದ್ರೋಹವೆಸಗುವ ಯಾವ ಹೇಸಿಗೆಗಳಿಗತ್ತ ಎಂದಿಗೂ ಚಿತ್ತವರಿಸಲೇ ಇಲ್ಲ, ಪತಿ ಇದ್ದಾಗಲು ಇದನ್ನೆ ಮಾಡಿದಳು ಇದರಿಂದಲೇ ತನ್ಬ ಮಗಳನ್ನು ಮದುವೆ ಮಾಡಿಕೊಟ್ಟು ದುಡಿದು ತಿಂದು ಬದುಕುವ ಒಂಟಿ ಯಾನಕ್ಕೆ ಯಾರ ಬೆಂಬಲವೂ ಇಲ್ಲ, ಸುಖಿ-ದುಃಖಗಳ ಹಂಚಿಕೊಳ್ಖುವುದಕ್ಕೆ ನೆಂಟರಿಷ್ಟರು ಇಲ್ಲ, ಹೀಗೆ ಮೂವತ್ತು ವರುಷಗಳಿಂದ “ಬಾಚಣಿಕೆ ಮಾರುಕಳಾಗಿ* ಸಮಾಜದ ಮುಖ್ಯವಾಹಿನಿಯಲ್ಲಿದ್ದಾಳೆ, ಇಂತಹ ನಿರ್ಗತಿಕಳಿಗೆ ಆಶ್ರಯಮನೆ ನೀಡಿದ್ದಾದರೆ ಅದು ಆಶ್ರಯ ಯೋಜನೆಯ ಮೌಲ್ಯ ಉಳಿದಂತೆ ಎನ್ನುವುದು ಅಶೋಕನಗರದ ಜನಪ್ರತಿನಿಧಿಗಳು ಒಮ್ಮಲೆ ಚಿಂತನೆ ನಡೆಸಬೇಕಾಗಿರುವುದು ಅಗತ್ಯವಾಗಿದೆ, ಮಾಜೀ ಶಾಸಕರು ಕೂಡ ಇದೇ ವಾರ್ಡಿನಲ್ಲಿದ್ದಾರೆ ಸುವರ್ಣಮ್ಮ ಎನ್ನುವ ಗಟ್ಟಿಗಿತ್ತಿಗೊಂದು ನೆಲೆ ದೊರಕಿಸಿಕೊಟ್ಟರೆ ಅದೊಂದು ಸಾರ್ಥಕವೇ ಸರಿ ಎನ್ನುವುದು ಈ ಸಾಲಿನ ಆಶಯವಾಗಿದೆ.
ಈ ದಿನಮಾನದಲ್ಲಂತೂ ಇನ್ನಷ್ಟು ಕ್ಲಿಷ್ಟಕರ ಸಂದರ್ಭಗಳು ಆಕೆಯ ಶ್ರಮಜೀವನದ ಚರಿಗೆ ತುಂಬಿ ತುಳುಕಾಡುತ್ತಿದೆ, ಕಳೆದ ವರುಷದಿಂದ ” ಕೊರೋನಾ” ಸಂಕಷ್ಟ, ಲಾಕ್ಡೌನ್, ಸೀಲ್ಡೌನ್, ವಾರಾಂತ್ಯ ಕರ್ಪ್ಯೂ, ಅನಾರೋಗ್ಯಗಳ ಧಾವಂತದ ನಡುವೆ, ಮಳೆ-ಗಾಳಿ ಎನ್ನದೆ ಹೊತ್ತಲ್ಲದ ಹೊತ್ತಿನಲ್ಲೂ ಇದೇ ತೂಕದ ಸಾಮಾಗ್ರಿಗಳ ಪೆಟ್ಟಿಗೆ ಹೊತ್ತು ಬರುವ “ಸುವರ್ಣಮ್ಮನ ವ್ಯಾಪಾರಕ್ಕೂ ಸಿಡಿಲು ಬಡಿದಂತಾಗಿದೆ, ಬೆಳ್ಳಂ ಬೆಳಿಗ್ಗೆ 6.00ಗಂಟೆಯಿಂದಲೇ ರಾತ್ರಿ ಮಡುಗಟ್ಟುವವರೆಗೆ ಕಾದು ಕುಂತರು 150ರೂ ಕೂಡ ವ್ಯಾಪಾರವಾಗುತ್ತಿಲ್ಲ ಎನ್ನುತ್ತಾಳೆ, ಹೀಗೆ ಒಮ್ಮೆಲೆ ಸುಮ್ಮನೆ ಕೂತು ಮೇಲೆ ಆಕಾಶದ ಚಿತ್ತಾರ ನೋಡಿ, ತನ್ನ ಸೆರಗಿನ ತುದಿಯಿಂದ ಮುಖವನ್ನು ಹೊರೆಸಿಕೊಳ್ಳುತ್ತಾಳೋ..? ಅಥವಾ ಬಿಸಿಗಂಬನಿಗಳನ್ನು ಮುಚ್ವಿಡುತ್ತಿದ್ದಾಳೋ..? ಕಣ್ಣಾಮುಚ್ಚಾಲೆಯಂತೆ ನೋವನ್ನು ತುಂಬಿಕೊಂಡು ನಗುವ ಪ್ರಯತ್ನ ಮಾಡುವ ಅವಳ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು,
ಈ ಇಳಿ ವಯಸ್ಸಿನಲ್ಲೂ ಆಕೆ ಬಾಡಿಗೆ ಮನೆಯನ್ನು ಆಶ್ರಯಿಸಿ *ಬಾಚಣಿಕೆ ಮಾರುಕಳಾಗಿ* ಬದುಕು ದೂಡುವ ಗಟ್ಟಿಗಿತ್ತಿಯಾಗಿ ಮಲೆನಾಡಿನಲ್ಲಿ ನಿಂದಿರುವುದು ಬಹುತೇಕ ಮಾದರಿ ಬದುಕುಗಳ ಸಾಲಿನಲ್ಲಿ ಬೆವರ ಹಣೆಬರಹವನ್ನು ಸ್ವತಃ ಬರೆದುಕೊಂಡಿದ್ದಾಳೆ ಸುವರ್ಣಮ್ಮ.
ಇಂತಹ ಸ್ವಾಭಿಮಾನಿ ಬದುಕು ಕುರಿತು ಒಂದೆರೆಡೆ ಸಾಲುಗಳ ಅಭಿವ್ಯಕ್ತಿಯನ್ನು ಆಕೆಯನ್ನು ಗಮನಿಸಿ, ಮಾತಾಡಿಸಿ, ಒಂದಷ್ಟು ಧೈರ್ಯ ತುಂಬಿ, ಸಮಾಜ ನಿಮ್ಮೊಂದಿಗಿದೆ ಎಂದು ಇಲ್ಲಿ ಬರೆದು ಉವಾಚಿಸಿದ್ದೇನೆ. ಬರೆಯುವ ಮೊದಲಗೊಂಡ ಒಂದು ಪದ ಮಾನವೀಯ ಜಗತ್ತಿನ ಕಣ್ಣುತೆರೆಸುತ್ತದೆ ಎನ್ನುವುದು ಆತ್ಮತೃಪ್ತಿ ಇದೆ. ಹೈ ಪ್ರೋಪೈಲ್ ರಾಜಕಾರಣ, ಓಲೈಕೆಗಳ ಹೊತ್ತುಗಳಿಗಾಗಿ ಹೊತ್ತೊತ್ತಿಗೂ ಕಾಯುವ ಮನಸ್ಥಿತಿಗಿಂತ ಇಂತಹ ಅನೇಕತೆಗಳ ಕುರಿತು ಮತ್ತಷ್ಟು ಬರೆಯಲು ಇದೇ ಸುವರ್ಣಮ್ಮ ಸ್ಪೂರ್ತಿ ಎಂದೇ ಅಂಬೋಣಿಸುತ್ತೇನೆ.

