I ವಾಣಿಜ್ಯ ತೆರಿಗೆ ಇಲಾಖೆಯಿಂದ ದಿಢೀರ್ ದಾಳಿ I ತೆರಿಗೆ ವಂಚನೆ ಪತ್ತೆ I
ಬೆಂಗಳೂರು, : ವಾಣಿಜ್ಯ ತೆರಿಗೆ ಇಲಾಖೆಯ ಜಾರಿ (ದಕ್ಷಿಣ ವಲಯ), ಬೆಂಗಳೂರು ವ್ಯಾಪ್ತಿಯ 35 ಅಧಿಕಾರಿಗಳ ತಂಡವು ಸರಕು ಮತ್ತು ಸೇವಾ ತೆರಿಗೆಗಳ (ಜಿ.ಎಸ್.ಟಿ) ವಿಭಾಗ-5 ರ ಸಹಯೋಗದೊಂದಿಗೆ ಖಚಿತ ಮಾಹಿತಿಯನ್ನಾಧರಿಸಿ ಯಲಹಂಕ, ಕಲ್ಯಾಣನಗರ, ಹೆಬ್ಬಾಳ, ಬಾಣಸವಾಡಿ, ಇಂದಿರಾನಗರ ಹಾಗೂ ದೇವನಹಳ್ಳಿ ಸೇರಿದಂತೆ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಲಾಯಿತು.
ಪರಿಶೀಲನೆಯ ವೇಳೆ ತೆರಿಗೆ ಬಾಧ್ಯತೆಯನ್ನು ತಪ್ಪಿಸಲು ‘ಖೊಟ್ಟಿ ಹೂಡುವಳಿ ತೆರಿಗೆ’ಯನ್ನು (Fake Input Tax Credit) ಬಳಸುತ್ತಿದ್ದ ಸರಕು ಸಾಗಣೆ ಏಜೆನ್ಸಿಗಳು, ನಿರ್ಮಾಣ ಸಾಮಗ್ರಿಗಳ ಸರಬರಾಜುದಾರರು, ಎಲೆಕ್ಟ್ರಾನಿಕ್ಸ್ ವರ್ತಕರು, ವಾಹನ ಬಿಡಿಭಾಗಗಳ ಮಾರಾಟಗಾರರು ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳ ಮೇಲೆ ದಾಳಿ ನಡೆಸಿ ಲೆಕ್ಕ ಪತ್ರಗಳನ್ನು ಪರಿಶೀಲಿಸಲಾಗಿದೆ.
ಅನೇಕ ವರ್ತಕರು ನಗದು ರೂಪದಲ್ಲಿ ತೆರಿಗೆ ಪಾವತಿಸುವುದನ್ನು ತಪ್ಪಿಸಲು ನಕಲಿ ಇನ್‍ವಾಯ್ಸ್‍ಗಳ ಮೂಲಕ ತೆರಿಗೆ ವಿನಾಯಿತಿ ಪಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ, ಇಲಾಖೆಗೆ ಸಲ್ಲಿಸಿದ ಸ್ವಯಂ ಘೋಷಿತ ತೆರಿಗೆ ವಿವರಗಳಿಗೂ ಮತ್ತು ವಾಸ್ತವಿಕ ವಹಿವಾಟಿಗೂ ಗಣನೀಯ ವ್ಯತ್ಯಾಸವಿರುವುದು ಪತ್ತೆಯಾಗಿದೆ.
ಈವರೆಗಿನ ತನಿಖೆಯಲ್ಲಿ ಸುಮಾರು 25 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ತೆರಿಗೆ ವಂಚನೆ ವಹಿವಾಟನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಪ್ರಸ್ತುತ ನಿಖರವಾದ ತೆರಿಗೆ ಸೋರಿಕೆಯ ಲೆಕ್ಕಾಚಾರ ಮುಂದುವರಿದಿದ್ದು, ಇನ್ನೂ ಹೆಚ್ಚಿನ ತೆರಿಗೆ ವಂಚನೆಯ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಸಾರ್ವಜನಿಕ ಸಂಪರ್ಕ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

