I ಯುದ್ಧವೆನ್ನುತ್ತಾರೆ I
ಅವರು ಯುದ್ಧವೆನ್ನುತ್ತಾರೆ
ಮಡುಗಟ್ಟಿದ ರಕ್ತದ ಕಲೆಗಳನ್ನು,
ಮುಗ್ಧ ಜನರ ನೋವಿನ ಕೂಗನ್ನು
ಅನಾಥ ಮಕ್ಕಳ ಕಣ್ಣೀರನ್ನು,
ಸೂರಿಲ್ಲದ ನಿರಾಶ್ರಿತರ ಗೋಳನ್ನು
ಮಾನವೀಯತೆ ಮರೆತ ಮನುಷ್ಯನ ಕೃತ್ಯಕ್ಕೆ
ಯುದ್ಧವೆನ್ನುವರು ಅವರು,
ಪ್ರೀತಿಯ ಉಸಿರ ಕಟ್ಟಿಸಿ
ದ್ವೇಷದ ಹೊಗೆಯ ಹಾಕುವರು,
ಅರಳುವ ಹೂಗಳ ಬಾಡಿಸಿ
ತರತರದಿ ಕಾಡಿಸುವರು,
ಅಸಹಾಯಕತೆ, ಕಣ್ಣೀರು ರಾಜ್ಯವಾಳುವಾಗ
ಅದಾವ ವ್ಯವಸ್ಥೆ ಗೆಲ್ಲುವುದೋ,
ಅದಾರ ಹೊಟ್ಟೆಗೆ ತಂಪೆರೆವುದೊ,
ಕಣ್ಣೆದುರಲಿ ಕಾಡುವ ಬದುಕು
ಪ್ರಶ್ನೆಯಾಗಿಯೇ ಉಳಿವ ಭವಿಷ್ಯ,
ರಕ್ತದ ಹಾದಿಯಲಿ ನಡೆದು
ಕೆಂಪಾದ ಅಂಗಾಲಿಗೆ,
ಅದೆಂತು ಹಾಸುವುದೋ ಹೂವನ್ನು
ಮುರುಟಿದ ಭರವಸೆಗಳ ಬೇರನು,
ಚಿಗುರಿಸಬಲ್ಲದು ಪ್ರೀತಿಯ ನೀರೊಂದೇ,
-ರಶ್ಮಿ ಶಮಂತ್ ಹೊಸನಗರ

